ದಕ್ಷ -
ಈ ಹೆಸರಿನವರು ಇಬ್ಬರು ಇದ್ದಾರೆ. ಒಬ್ಬ ಚಾಕ್ಷುಷ ಮನ್ವಂ ತರದವ. ಇನ್ನೊಬ್ಬ ಸ್ವಾಯಂಭುವ ಮನ್ವಂತರದವ. 

ಚಾಕ್ಷುಷ ಮನ್ವಂತರದ ದಕ್ಷ ಹತ್ತು ಮಂದಿ ಪ್ರಚೇತಸರಿಂದ ಮಾರಿಷೆ ಎಂಬವಳಲ್ಲಿ ಹುಟ್ಟಿದವ. ಈತ ಸೃಷ್ಟಿಕಾರ್ಯದಲ್ಲಿ ನಿರತನಾಗಿ ಭೂತ, ಸರ್ಪಗಳು, ಅಸುರರು, ದೇವತೆಗಳು, ಪಕ್ಷಿಗಳು, ಗಂಧರ್ವರು, ಪ್ರಜೆಗಳು - ಇವರನ್ನು ಸೃಷ್ಟಿಮಾಡಿ ಅವರಲ್ಲಿ ಪ್ರಜೆಗಳನ್ನು ವೃದ್ಧಿಗೊಳಿಸಬೇಕೆಂದು ಬಯಸಿ ವಾರಣನೆಂಬ ಪ್ರಜಾಪತಿಯ ಮಗಳು ವಾರಿಣಿ ಅಥವಾ ಆಸಿಕ್ನಿ ಎಂಬವಳನ್ನು ಮದವೆಯಾಗಿ ಸಾವಿರಾರು ಪುತ್ರರನ್ನು ಪಡೆದು ಅವರನ್ನೆಲ್ಲ ಸೃಷ್ಟಿಕಾರ್ಯದಲ್ಲಿ ನಿಯೋಜಿಸಿದ. ಸ್ತ್ರೀಪುರುಷರ ಸೇರುವಿಕೆಯಿಂದ ಸಂತಾನೋತ್ಪತ್ತಿಯಾಗುವ ಕ್ರಮ ಈತನಿಂದಲೇ ಮೊದಲಾಯಿತು. ಹೀಗೆ ದಕ್ಷನ ಮಕ್ಕಳೆಲ್ಲ ಸೃಷ್ಟಿಕಾರ್ಯದಲ್ಲಿ ತೊಡಗಿರಲು ಅದೇ ಪರಮ ಪುರುಷಾರ್ಥವಲ್ಲವೆಂದು ತಿಳಿಸಿದ ನಾರದ ದಕ್ಷನ ಮಕ್ಕಳನ್ನು ಸೃಷ್ಟಿಕಾರ್ಯದಿಂದ ವಿಮುಖರಾಗುವಂತೆ ಮಾಡಿದ. ಕಡೆಗೆ ದಕ್ಷ ನಾರದನಿಗೆ ಶಾಪವಿತ್ತು ಅರವತ್ತು ಮಂದಿ ಪುತ್ರಿಯರನ್ನು ಪಡೆದು ಅವರನ್ನೆಲ್ಲ ಋಷಿಗಳಿಗೂ ದೇವತೆಗಳಿಗೂ ಧಾರೆಯೆರೆದ. 

ಸ್ವಾಯಂಭುವ ಮನ್ವಂತರದ ದಕ್ಷ ಒಬ್ಬ ಪ್ರಜಾಪತಿ. ಬ್ರಹ್ಮನ ಬಲಗೈ ಹೆಬ್ಬೆಟ್ಟಿನಿಂದ ಹುಟ್ಟಿದವ. ಇವನಿಗಿದ್ದ ಹೆಣ್ಣುಮಕ್ಕಳ ಸಂಖ್ಯೆ 24, 40, 60 ಎಂದು ಬಗೆಬಗೆಯಾಗಿ ಹೇಳಿದೆ. ತನ್ನ ಹೆಣ್ಣುಮಕ್ಕಳಲ್ಲೊಬ್ಬಳಾದ ಸತೀದೇವಿಯನ್ನು ಈತ ಶಿವನಿಗೆ ಕೊಟ್ಟು ಮದುವೆ ಮಾಡಿದ. ಒಮ್ಮೆ ದೇವಸಭೆಗೆ ಹೋಗಿದ್ದ ಸಮಯದಲ್ಲಿ ಶಿವ ತನ್ನನ್ನು ಸರಿಯಾಗಿ ಆದರಿಸಲಿಲ್ಲವೆಂದೂ ಮರ್ಯಾದಿಸಲಿಲ್ಲವೆಂದೂ ಶಿವನನ್ನು ಆಹ್ವಾನಿಸದೇ ದಕ್ಷ ಯಜ್ಞವೊಂದನ್ನು ಮಾಡಲು ಉದ್ಯುಕ್ತನಾದ. ಇದನ್ನು ತಿಳಿದ ಸತೀದೇವಿ ತಂದೆಯ ಆಹ್ವಾನವಿಲ್ಲದಿದ್ದರೂ ಪತಿಯ ಅಪ್ಪಣೆ ಪಡೆದು ತಂದೆ ಯಾಗ ಮಾಡುತ್ತಿದ್ದಲ್ಲಿಗೆ ಬಂದು ತಿರಸ್ಕಾರಕ್ಕೆ ಪಾತ್ರಳಾದುದಲ್ಲದೇ, ಪತಿ ನಿಂದನೆಯನ್ನೂ ಕೇಳಬೇಕಾಗಿ ಬಂದುದರಿಂದ ನೊಂದು ಯೋಗಾಗ್ನಿಯಲ್ಲಿ ಬಿದ್ದು ಪ್ರಾಣತ್ಯಾಗ ಮಾಡಿದಳು. ಈ ವಿಷಯವನ್ನರಿತ ಶಿವ ಕೋಪದಿಂದ ದಕ್ಷನನ್ನು ಶಿಕ್ಷಿಸಲು ವೀರಭದ್ರನನ್ನು ಕಳುಹಿಸಿದ. ಶಿವನಾಜ್ಞೆ ಹೊತ್ತ ವೀರಭದ್ರ ಯಜ್ಞವನ್ನು ನಾಶಮಾಡಿದ್ದಲ್ಲದೇ ದಕ್ಷನ ತಲೆಯನ್ನೂ ಹಾರಿಸಿದ. ಆಗ ಬ್ರಹ್ಮ ಶಿವನನ್ನು ಪ್ರಾರ್ಥಿಸಲಾಗಿ ದಕ್ಷನಿಗೆ ಪ್ರಾಣ ಬಂದಿತಾದರೂ ದಕ್ಷನ ತಲೆ ಕುರಿದಲೆಯಾಯಿತು. ಮುಂದೆ ಯಜ್ಞವನ್ನು ಪೂರ್ತಿಮಾಡಿ ದಕ್ಷ ಶಿವನನ್ನು ಸತ್ಕರಿಸಿದ. 

ದಕ್ಷನೆನ್ನುವ ಹೆಸರು ಸಮರ್ಥವೆನ್ನುವ ಅರ್ಥ ಕೊಡುತ್ತದೆ. ದಕ್ಷನೆಂಬ ಹೆಸರಿನಲ್ಲಿ ಚಿತ್ರಸೇನನ ಮಗ, ಉಶೀನರನ, ಮಗ ದೇವತಿಥಿಯ ಮಗ, ವಿಶ್ವದೇವರಲ್ಲೊಬ್ಬ, ಭೃಗುವಿನ ಮಗ, ಒಬ್ಬ ಸನ್ಯಾಸಿ - ಎಂದು ಹಲವಾರು ಮಂದಿಯನ್ನು ನಿಘಂಟುಗಳಲ್ಲಿ ಹೆಸರಿಸಿದೆ. ಧರ್ಮಶಾಸ್ತ್ರವನ್ನು ಬರೆದ ಹದಿನೆಂಟು ಜನರಲ್ಲಿ ದಕ್ಷನೂ ಒಬ್ಬ. ಸ್ವಾಯಂಭುವ ಮನ್ವಂತರದ ದಕ್ಷನ ಚರಿತ್ರೆ ಬಹಳಷ್ಟು ಪುರಾಣಗಳಲ್ಲಿ ಉಕ್ತವಾಗಿದೆ. ಶಿವಪುರಾಣದಲ್ಲಿ ಶಿವನ ಶ್ರೇಷ್ಠತೆಯನ್ನು ಸಾರುವ ಕಥೆಯಾಗಿ ಇದಕ್ಕೆ ಬಹು ಪ್ರಾಧಾನ್ಯ ಉಂಟು. 
											(ಆರ್.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ